Wednesday, December 15, 2010

ಮಾತಿನಲ್ಲೊಂದು ಮಾತು

ಮುನ್ನುಡಿ:
ಮನಸ್ಸು ಅತಿಯಾಗಿ ದುಖಃದ ಹೊಳೆಯಲ್ಲಿ ಮುಳುಗಿದ್ದಾಗ, ಕತ್ತಲೆಯ ಕಾಲುವೆಯಲ್ಲಿ ಈಜುಸುತಿರುವಾಗ, ನನ್ನವರು ನಮ್ಮವರು ಯಾರೂ ಬಳಿಯಲ್ಲಿ ಇಲ್ಲದೆ ಮನಸ್ಸು ಏಕಾಂತದ ಬಿಸಿಯಲ್ಲಿ ಬೇಯುತಿರುವಗ, ನೋವಿನ ಕನ್ನಡಿಯ ಶೃಂಗಾರ ಗೊಂಬೆಯಾದಾಗ, ಮನಸ್ಸು ಕುರೂಪಿಯಾದಾಗ.. ಈ ಜೀವನದ ಬಂಡಿಯಲ್ಲಿ ಸಂತೊಷದ ಅಲೆಯನ್ನು ಶೃಷ್ಠಿಸಲಿಕ್ಕೆ, ಮನಸ್ಸನ್ನು ಕುರೂಪು ತನದಿಂದ ದೂರ ಮಾಡಲಿಕ್ಕೆ, ಏಕಾಂತದ ಚಿತೆಯಿಂದ ಹೊರಬರಿಸಲಿಕ್ಕೆ ಮಾತಿನ ಬಾಣಗಳು ಅತ್ಯಾವಶ್ಯಕ. ನಾವು ಯಾರಿಗೂ ಯಾವ ವಿಧದ ಸಹಾಯಮಾಡದಿದ್ದರೂ ಸರೀನೆ, ಆದರೆ ನಮ್ಮ ಮಾತಿನಲ್ಲಿ ಮಜ್ಜಿಗೆಯ ತಂಪು ನೀಡಿದರೆ, ಕೇಳುವವರ ಮನಸ್ಸು ಅಮೃತದ ವಾಸನೆ ತಗೋಳದೆ ಇರುತ್ತೆ. ದಾರಿಯಲ್ಲಿ ಸಿಕ್ಕ ವಯಸ್ಸಾದ ವೃದ್ಧನಿಗೆ ನಾವು ತಾತ ಅಥವ ಅಜ್ಜ ಎಂದು ಕರೆದ ಕೂಡಲೆ ಅವರ ಮುಖದಲ್ಲಿ ಅರಳೊ ಸಂತೊಷದ ಅಲೆಗಳಿಗೆ ಬೆಲೆ ಕಟ್ಟುವುದಕ್ಕೆ ಸಾಧ್ಯವೆ. ಮಾತಿನಲ್ಲಿ ಹಲವಾರು ಮಾತುಗಳಿವೆ ಅವುಗಳನ್ನು ಅರಿತು ಹಿತವಾಗಿರೊ ಮಾತನ್ನು ಆಡಿದರೆ, ಕೇಳುವವರ ಮನಸ್ಸಿಗೆ ಒಂದಿಷ್ಟು ಮಜ್ಜಿಗೆ ಕುಡಿಸಿದಂತಾಗುವುದು. ಗಾದೆನೆ ಇದೆಯಲ್ಲವ " ಮಾತು ಬಲ್ಲವನಿಗೆ ಜಗಳವಿಲ್ಲ".
ನಿಮ್ಮ ಎಲ್ಲಾ ಮಾತು ಮುತ್ತಿನಂತೆ ಇರಲಿ ಎಂದು ಬಯಸುತ್ತ, ಮಾತಿನ ಕಾಡಿನಲ್ಲಿ..
ಮುಗುಳುನಗೆಯ ಜಿಂಕೆಯಾಗಿ ಇಂದು ಮನಸ್ಸು ಕುಣಿದಾಡುತ್ತ ಇಟ್ಟ ಹೆಜ್ಜೆಯ ಗುರುತು ಈ ನನ್ನ ಮಾತಿನಲ್ಲೊಂದು ಮಾತು.


ಮಾತಿನಲ್ಲೊಂದು ಮಾತು ಮುಗುಳುನಗೆ ಬೀರಿದರೆ, ಮನಸ್ಸೆಂಬ ಸರೋವರದಲ್ಲಿ ಸಂತೋಷದ
ಅಲೆಗಲು ಉದ್ಭವಿಸಲಾರದೆ. ಮಾತಿನ ಮಂಟಪದಲ್ಲಿ ಮಾತು ಮಾತುಗಳ ನಡುವೆ ಪ್ರೀತಿ
ಪ್ರೇಮಗಳ ಸರಮಾಲೆಗಳಾದಾಗ ಮನಸ್ಸೆಂಬ ಹುಚ್ಚು ಹೊಳೆಯಲ್ಲಿ ಆನಂದದ ಮಳೆಯು
ಬೀಳಲಾರದೆ? ಹೃದಯದಿಂದ ಮತ್ತೊಂದು ಹೃದಯಕ್ಕೆ ತಲಪುವ ಮಾತಿನ ಅಲೆಗಳನ್ನು
ಕಣ್ಣಿಂದ ಕಾಣಲು ಸಾಧ್ಯವೆ? ಹೃದಯದ ಮಾತುಗಳನ್ನು ಅನುಭವಿಸಿದ ಕ್ಷಣಗಳನ್ನು
ಮರೆಯಲು ಸಾಧ್ಯವೆ?


ಭಿಕ್ಷುಕನ ಕೂಗಿನಲ್ಲಿ ಅದ್ಯಾವ ಮಾತು ಮನಸಿನ ಧೃಡತೆಯನ್ನು ಹೊಡೆದು ಕನಿಕರ
ಮನಸಿನ ಬಾಗಿಲನ್ನು ತಗೆಯುವುದೊ? ಕಣ್ಣಿನ ನೋಟದಲ್ಲಿ ಅದೆಷ್ಟು ಮಾತುಗಳು ಅಡಗಿದೆ
ಎಂದು ಯಾರಿಗೆ ಹೇಳಲು ಸಾಧ್ಯ. ಮಾತಿಲ್ಲದ ಮೌನದಲ್ಲಿ ಅದೆಷ್ಟು ಮಾತುಗಳು ಅಡಗಿದೆ
ಎಂದು ಊಹೆಗೆ ಎಟಕುವುದೆ ಹೇಳಿ.... ಮೌನದಲ್ಲಿ ಮನಸಿನ ಹಲವಾರು ಬಾಗಿಲುಗಳು ತೆರೆದು
ವಿಶಾಲವಗಿರೊ ನೀಲಿ ಮೇಘಗಳ ನಡುವೆ ಸಂಚಾರ ನಡೆಸುವ ಮನಸಿಗೆ, ಹಲವಾರು
ಮಾತುಗಳ ಮೆರವಣಿಗೆ ನಡೆಯುತ್ತದೆ. ನೀಲಿ ಮೇಘಗಳ ಮಾತಲ್ಲಿ, ಸುಂದರ
ವಿಶಾಲಮನೊಭವಗಳ ಜಾತ್ರೆ ಕಂಡುಬಂದರೆ, ಬೆಳ್ಳಿ ಮೊಡಗಳ ಮಾತಲ್ಲಿ, ನೀಲಿ
ಬಾನಿಗೆ ಬೆಳಕಿನ ದೀಪಗಳ ಸಂತೆಯಗಿ ತೊರಿಬರುತ್ತದೆ. ಕಪ್ಪು ಮೊಡಗಳ ಮಾತಲ್ಲಿ,
ಮುಸ್ಸಂಜೆಯ ಮುಸುಕಲ್ಲಿ ಮೇಘಗಳು ಪರಸ್ಪರ ಒಂದುಕ್ಕೊಂದು ಸ್ಪರ್ಷಿಸಿ, ಪ್ರೇಮದ
ಖಗ್ಗತ್ತಲಲ್ಲಿ ಕಳೆದುಹೋಗುವ ಮಾತುಗಳು ಕೇಳಿಬರುತ್ತವೆ...


ನೀರಿನ ಸಂಚಲನದಲ್ಲಿ ಅಡಗಿರುವ ಮಾತು ಮನಸ್ಸಿನಲ್ಲಿ ಅಡಗಿರುವ ಅದೆಷ್ಟು
ಮನಸ್ಸುಗಳನ್ನು ಒಗ್ಗೂಡಿಸಿ, ಮನಸನ್ನು ಏಕಾಗ್ರತೆಯ ಸವಿಬಂಧನದಲ್ಲಿರಿಸುತ್ತದೆ.
ವಿರಹದಲ್ಲಿರೋ ಪ್ರೇಮಿಯು ತನ್ನ ಪ್ರಿಯತಮೆಯನ್ನು ಕಂಡಾಗ, ಹೃದಯದಲ್ಲಾಗುವ ಮಾತಿಗೆ
ಕೊನೆ ಎಲ್ಲಿದೆ. ಬಾಯಿಂದ ಬರುವ ಮಾತು ಕೇವಲ ೪ ಸಾಲಾದರೆ, ಮನಸ್ಸಿನಲ್ಲಿ ಮೂಡಿಬರುವ
ಮಾತುಗಳ ಮಹಲಿಗೆ ಬಣ್ಣ ಹಚ್ಚುವವರಾರು. ಮನಸ್ಸಿನಲ್ಲಿ ಮೂಡಿಬರುವ ಒಂದೊಂದು
ಮಾತುಗಳಿಂದ ಮುತ್ತಿನ ಹಾರ ಪೋಣಿಸಿ ತನ್ನ ಪ್ರೀಯತಮೆಯ ಕೊರಳಲ್ಲಿ ಹಾಕಿದಾಗ,
ಹೃದಯದಲ್ಲಿ ಸ್ವರ್ಗದ ದೀಪ ಹಚ್ಚಿದಂತಾಗವುದು.


ಮನಸ್ಸಿಲ್ಲದ ಮಾತುಗಳಿಂದ ಸಂಗೀತದ ನಾದ ನುಡಿಸಬಲ್ಲದೆ?ಇಂಪಾದ ಮಾತಿನಲ್ಲಿ
ತಂಪಾದ ಗಾಳಿಯ ಗಂಧವನ್ನು ಯಾರು ಅರಿಯುವರು. ಮಲ್ಲಿಗೆ ಹೂವಿನ ಸುಗಂಧ ಮೂಗಿಗೆ
ಬೀರಿದ ಕ್ಷಣವೆ, ಮನಸ್ಸಿನಲ್ಲಾಗುವ ಬದಲಾವಣೆಗೆ ಅದ್ಯಾವ ಮಾತು ಹೊರಬರುವುದೋ
ಯಾರು ಕಾಣುವವರು. ಮಾತು ಕೇವಲ ಮಾತಾಗಿದ್ದರೆ ಅದನ್ನು ಸಂಭಷಣೆ ಅನ್ನಬಹುದು,
ಆದರೆ ಭಾವನೆಗಳಿಂದ ಹೊರಹೊಮ್ಮುವ ಶಬ್ಧವಿಲ್ಲದ ಮಾತಿನ ಬಾಣಕ್ಕೆ, ಹೃದಯದ
ಬಡಿತದಲ್ಲಾಗುವ ಬದಲವಣೆಯೇ ಸಾಕ್ಷಿಯಾಗಿರುತ್ತದೆ.


ಮೇಘಗಳ ಸಂಘರ್ಶದಿಂದ ಹೊರಹೊಮ್ಮುವ ಶಬ್ಧವನ್ನು ಅದ್ಯಾವ ಮಾತೆನ್ನುವುದು,
ಅದಕ್ಕೆ ಯಾವ ಭಾಷೆಯಂತೆನಾದರು ಕರೆಯಬಹುದು. ಮಾತುಗಳು ಕೇವಲ ಭಾಷೆಯಿಂದ
ಬರುವುದೆನ್ನುವುದಾದರೆ ಮೇಘಗಳ ಘರ್ಷಣೆಗೆ ಯಾವ ಅರ್ಥ ಕೊಡುವುದು.
ಅಂತರಂಗದ ತೆರೆಯಲ್ಲಿ ಛಾಯಿಸಿದ ಚಿತ್ರಣಗೆ ಜೀವನೀಡಿದಾಗ ಅನುಭವವಾಗುವುದು
ಮಾತಿನಲ್ಲೊಂದು ಮಾತು.


ಕೆಲವೊಮ್ಮೆ, ಮನಸ್ಸು ಅದನ್ನು ಘ್ರಹಿಸಿ ಆನಂದಿಸುತ್ತದೆ, ಕೆಲವೊಮ್ಮೆ ಮಂಕು ತಿಮ್ಮನ
ಬಂಡಿಯಲ್ಲಿ ಸಾರಥಿಯಾಗಿ ರಥವನ್ನು ದಿಕ್ಕಿಲದ ದಾರಿಯಲ್ಲಿ ಸಾಗಿಸುತ್ತದೆ.
ಹಿತವಾದ ಮಾತು ಮಲ್ಲಿಗೆ ಹೂವಿನ ಕೋಮಲತೆಯನ್ನು ಅರಳಿಸಿದರೆ, ಮಾತಿನ ಮಲ್ಲಿಗೆ
ಹೂವಿನ ಸುಗಂಧದಲ್ಲಿ, ಮನಸ್ಸು ತೇಲಿ ಮಗ್ನನಾದಗ, ಹರುಷಕ್ಕೆ ಕೊನೆಯೆಲ್ಲಿದೆ ಹೇಳಿ.
ಅದಕ್ಕೆ ಹಿರಿಯವರು ಹೇಳಿರೋದು ಮಾತು ಮುತ್ತಿನಂತೆ ಇರಬೇಕ್ಕೆಂದು. ಅದರಲ್ಲು ಮಾತು
ಕನ್ನಡದಲ್ಲಿ ಮಾತಾಡಿದರಂತು ಬರಿ ಮುತ್ತಾಗಿರೊದಲ್ಲದೆ ಮುತ್ತಿನ ಮಾಲೆಯಾಗುವುದು.


ಕನ್ನಡದ ಮುತ್ತಿನ ಮಾತಿನ ಮಳೆಯ ಹನಿಗಳ ಕೆರೆಯಲ್ಲಿ,
ಸಣ್ಣ ಎಲೆಯ ಮೇಲೆ ಬರೆದ ನಾಲ್ಕು ಸಾಲಿನ ಈ ನನ್ನ ಮಾತಿನಲ್ಲೊಂದು ಮಾತು.